ॐ गणेशाय नमः
ಮಾನಸಪೂಜೆ
ಮಾನಸಪೂಜೆಗೆ ಬೇಕಾದ ನಿಶ್ಚಯ
ಜೀವನಿಗೆ ಸುಖದಲ್ಲಿಯೇ ಸಹಜ ಪ್ರೇಮವಿರುತ್ತದೆ. ಎಲ್ಲರೂ ಸುಖವನ್ನು ಬಯಸುತ್ತಾರೆ. ಆದರೆ ಸುಖವು ಎಲ್ಲಿರುತ್ತದೆ, ಸುಖದ ಸ್ವರೂಪವೇನು, ಎಂಬ ವಿಷಯಗಳ ಬಗ್ಗೆ ಜನರ ತಿಳಿವಳಿಕೆ ಮಾತ್ರ ತಪ್ಪು ತಪ್ಪಾಗಿಯೇ ಉಳಿದಿದೆ. ಏತರಲ್ಲಿ, ಸುಖವಿರುವ ಸಂಭಾವನೆ ಇರಲಿ ! ಅದರ ಛಾಯೆಯೂ ಇಲ್ಲವೋ, ಅಂತಹ ವಸ್ತು ಮತ್ತು ವ್ಯಕ್ತಿಗಳಲ್ಲಿ ಜನರು ಸುಖವಿದೆಯೆಂದು ಗಟ್ಟಿಯಾಗಿ ನಂಬಿ ಕುಳಿತುಬಿಟ್ಟಿದ್ದಾರೆ. ಇಂತಹ ಪದಾರ್ಥಗಳಿಂದ ಹಗಲೂರಾತ್ರಿ ದುಃಖವೇ ಆಗುತ್ತದೆ. ಯಾವದೇ ನಶ್ವರ ವಸ್ತುವಿನಿಂದ ನಿತ್ಯ ಸುಖದ ಪ್ರಾಪ್ತಿಯಾಗುವದಿಲ್ಲ. ಇದರಿಂದ ನಮಗೆ ಬೇಕಾದದ್ದು ಪ್ರಪಂಚದ ಯಾವುದೋ ಒಂದು ವಸ್ತು ಅಥವಾ ವ್ಯಕ್ತಿ ಅಲ್ಲ ಎಂಬುದು ಸಿದ್ಧವಾಗುತ್ತದೆ. ನಮಗೆ ಬೇಕಾಗಿರುವದು ಅವಿನಾಶಿಯಾದ ಸುಖ -- ಮತ್ತು ಈ ರೀತಿ ಭಗವಂತನು ಮಾತ್ರ ಇದ್ದಾನೆ. ಮತ್ತಾತ ಕೃಷ್ಣನ ರೂಪದಲ್ಲಿ ಪ್ರಕಟನಾಗಿದ್ದಾನೆ. (ಲೇಖಕರು ಕೃಷ್ಣಭಕ್ತರು, ಆದರೆ ವಾಚಕ ಸಾಧಕರು ತಮ್ಮ ತಮ್ಮ ಇಷ್ಟದೇವತೆಯನ್ನು ಊಹಿಸಿಕೊಳ್ಳಬಹುದು) ನಮ್ಮ ಜೀವನದ ಸರ್ವಸುಖ, ಸಮಾಧಿ, ಬ್ರಹ್ಮ ಎಲ್ಲವೂ ಪ್ರೀತಿಯ ಕೃಷ್ಣನು ಮಾತ್ರ. ಈ ಶ್ಯಾಮಸುಂದರ, ನವಿಲುಗರಿಯವ, ಪೀತಾಂಬರಧಾರಿ, ನಂದಕಿಶೋರನೇ ನಮ್ಮ ಪ್ರಾಣಗಳ ಒಡೆಯ, ಹೃದಯೇಶ್ವರ -- ಹೀಗೆ ನಿಶ್ಚಯಬುದ್ಧಿ ಬಂದಾಗಲೇ ‘ಮಾನಸಪೂಜೆ’ ಪ್ರಾರಂಭವಾಗುತ್ತದೆ.
೧. ಶರೀರವು ಸ್ನಾನಾದಿಗಳಿಂದ ಶುದ್ಧವಾಗಲಿ. ಮನಸ್ಸು, ಸ್ಥಾನ ಮತ್ತು ಕುಳಿತುಕೊಳ್ಳುವ ಅಸನ ಇವೆಲ್ಲವೂ ಪವಿತ್ರವಾಗಿರಲಿ.
೨. ಪ್ರತಿದಿನ ಒಂದೇ ಸಮಯ ಮತ್ತು ಆಸನ ಹಾಗು ಸ್ಥಾನವಾದರೆ ಮನಸ್ಸಿಗೆ ಹಿತವಾಗುತ್ತದೆ. (ಪ್ರಾಥಮಿಕವಾಗಿ ಈ ನಿಯಮವನ್ನು ಪಾಲಿಸಬೇಕಾಗುತ್ತದೆ, ಇದರಿಂದ ಮನಸ್ಸಿಗೆ ಶುದ್ಧಿ ಬಂದು ಪ್ರಬುದ್ಧತೆಯು ದೊರೆತ ನಂತರ ಎಲ್ಲಾ ದೇಶಕಾಲಗಳೂ ಭಗವನ್ಮಯ ಎಂದೆನಿಸುವಾಗ ಈ ನಿಯಮ ಸಡಿಲಗೊಳ್ಳುತ್ತದೆ)
೩. ಪ್ರಪಂಚದ ಎಲ್ಲ ಚಿಂತೆಗಳನ್ನು ಬಿಟ್ಟು ನಿಶ್ಚಿಂತನಾಗಿ ‘ಸರ್ವದಾ ಭಗವಂತನ ಸೇವೆಯೇ ನನಗಿರಲಿ’ ಎನ್ನುವ ಸಂಕಲ್ಪವನ್ನು ಮಾಡಬೇಕು.
ಆಂತರಿಕ ಮತ್ತು ಬಾಹ್ಯ ವಿಘ್ನಗಳ ನಿವಾರಣೆಗಾಗಿ ಧ್ಯಾನ
೪. ಆಸನದಲ್ಲಿ ಕುಳಿತು ‘ಓಂ ರಂ’ ಈ ಮಂತ್ರದ ಜಪವನ್ನು ಮಾಡಿ ನಾಲಕ್ಕೂ ದಿಕ್ಕಿಗೂ ನೀರನ್ನು ಸಿಂಪಡಿಸುತ್ತಾ ‘ನನ್ನ ನಾಲ್ಕು ಬದಿಯಲ್ಲಿಯೂ ಅಗ್ನಿಮಯವಾದ ಗೋಡೆಯಿದ್ದು ನಾನು ಇದರಲ್ಲಿದ್ದು ಭಜಿಸುತ್ತಾ ಪೂಜಿಸುತ್ತಿರುವವರೆಗೂ ಯಾವ ವಿಘ್ನವೂ ಬರಲಾರದು’ ಎಂದು ಭಾವಿಸಬೇಕು.
‘ನಾನು ಪೂಜಿಸುತ್ತೇನೆ’ ಎಂಬ ಅಹಂ ಕಳೆಯುವದಕ್ಕಾಗಿ ಭಾವನೆ.
೫. ಮೊಟ್ಟಮೊದಲು ನನ್ನೆದುರಾಗಿ ಶಿರಸ್ಸಿನ ಮೇಲ್ಭಾಗದಲ್ಲಿ ಒಂದು ಕಮಲದ ಮೇಲೆ ನನ್ನ ಇಷ್ಟದೇವರು ಪ್ರತ್ಯಕ್ಷನಾಗಿದ್ದಾನೆ ಮತ್ತು ಅವನ ಉಗುರುಗಳ ಕಡೆಯಿಂದ ಅಮೃತದ ಧಾರೆಯು ಹರಿದು ಹರಿದು ನನ್ನ ತಲೆಯ ಮೇಲೆ ಬೀಳುತ್ತಿದೆ. ಅದರಿಂದ ಒಳಹೊರಗೆ ಎಲ್ಲವೂ ಶುದ್ಧವಾಗುತ್ತಿದೆ. ನನ್ನ ಶರೀರವೀಗ ದಿವ್ಯವಾಗಿ ಭಗವಂತನ ಸೇವೆಗೆ ಯೋಗ್ಯವಾಗುತ್ತಾ ಇದೆ ಎಂದು ಭಾವಿಸಬೇಕು.
ದೈಹಿಕ ಮಾನಸಿಕ ಚಂಚಲತಾ ನಿವಾರಣೆಗಾಗಿ ಚಿಂತನೆ
೬. ಶೇಷನಾಗನ ಶಿರಸ್ಸಿನ ಮೇಲೆ ಭೂಮಿಯಿದೆ, ಹಾಗೆಯೇ ಅವನ ದೇಹದ ಮೇಲೆ ಭಗವಂತನು ಮಲಗಿದ್ದಾನೆ. ಶೇಷನೇನಾದರು ಸ್ವಲ್ಪ ಅಲುಗಾಡಿದರೂ, ಭೂಮಿಯೇ ಅಲುಗಾಡಿ ಬಿದ್ದುಬಿಡುವದು ಆದ್ದರಿಂದಲೇ ಆತ ಅಚಲವಾಗಿ ಸ್ಥಿರವಾಗಿ ಇರುತ್ತಾನೆ. ಹಾಗಾಗಿ ಅವನ ಸ್ಥಿರತೆಯನ್ನು ಧ್ಯಾನಿಸುವದರಿಂದ ನಮ್ಮ ಶರೀರವೂ ಸ್ಥಿರತೆಯನ್ನು ಪಡೆಯುತ್ತದೆ.
೭. ನಂತರ ಹೀಗೆಂದು ಭಗವಂತನನ್ನು ಪ್ರಾರ್ಥಿಸಬೇಕು -- ‘ಹೇ ಪ್ರಭುವೇ! ಎಲ್ಲಾ ವೇದ, ಶಾಸ್ತ್ರ, ಪುರಾಣ, ಸಂತರು, ಸದ್ಗುರುಗಳು ಹಾಗು ನೀನೂ ಕೂಡ ‘ಈಶ್ವರನು ಎಲ್ಲರ ಹೃದಯದಲ್ಲಿದ್ದಾನೆ’ ಎಂದು ಹೇಳುತ್ತೀರಿ’. ‘ಹಾಗಾದರೆ ಅವಶ್ಯವಾಗಿ ನನ್ನ ಹೃದಯದಲ್ಲೂ ಇದ್ದೆ ಇದ್ದೀಯೇ’. ‘ಆದರೆ ಏಕೆ ನನಗೆ ನೋಡಸಿಗುವದಿಲ್ಲ ? ನನ್ನ ಮನಸ್ಸೇನೋ ನಿನ್ನಿಂದ ದೂರವಾಗುತ್ತಿದೆ ಮತ್ತು ಪ್ರಪಂಚದ ಕಡೆಗೆ ಓಡೋಡಿಹೋಗುತ್ತಿದೆ, ಎನ್ನುವದು ಸತ್ಯವೇ. ಆದರೂ ಈಗ, ನಿನ್ನಿಂದ ಸಂತರಿಂದ ಮತ್ತು ಮಹಾತ್ಮರ ಕೃಪೆಯಿಂದ ಈ ಪ್ರಪಂಚದಲ್ಲಿ ಸುಖವಿಲ್ಲ, ಶಾಂತಿಯಿಲ್ಲ ಎಂಬುದು ಅರ್ಥವಾಯಿತು ತಂದೆ. ಆದ್ದರಿಂದಲೇ ಎಲ್ಲದರಿಂದ ದುಃಖಗೊಂಡು, ನಿರಾಶೆಗೊಂಡು ನಿನ್ನ ಕಾಲಿಗೆ ಶರಣು ಬಂದೆ. ಇವನನ್ನು ನಿನ್ನವನನ್ನಾಗಿಸೋ. ಪಾಹಿ ಮಾಮ್ ! ಪಾಹಿ ಮಾಮ್ !! ಕಾಪಾಡೋ! ಕಾಪಾಡೋ!!’
೮. ನಿಮ್ಮ ದರ್ಶನಕ್ಕೆ ನನ್ನ ಮನಸ್ಸು ಚಡಪಡಿಸುತ್ತಿದೆ. ಕಣ್ಣುಗಳು ಕಾತರಗೊಳ್ಳುತ್ತಿವೆ. ಪ್ರಾಣ ವ್ಯಾಕುಲಗೊಳ್ಳುತ್ತಿದೆ. ಈ ಕಿವಿಗಳು ನಿನ್ನ ಬೆಲ್ಲದಂತಹ ಸಿಹಿಸಿಹಿ ಮಾತುಗಳನ್ನು ಕೇಳಲು ಬಯಸುತ್ತಿದೆ. ನನ್ನ ಈ ಎರಡು ಕೈಗಳು ನಿನ್ನ ಕಾಲುಗಳನ್ನು ಹಿಡಿದು ಹೃದಯದ ಮೇಲಿಟ್ಟುಕೊಳ್ಳಲು ಧಡಪಡಿಸುತ್ತಿವೆ. ಹೇ ನಾಥ ! ಓ ಸ್ವಾಮೀ ! ಪ್ರಾಣೇಶ್ವರ ! ಇನ್ನು ಹೆಚ್ಚು ತ್ರಾಸ ಕೊಡಬೇಡಪ್ಪ ! ಕೃಪೆ ಮಾಡು ಕೃಪೆ ಮಾಡು! ಬೇಗನೆ ಪ್ರಕಟವಾಗಿ ದರ್ಶನ ಕೊಡೋ !
೯. ಹೃದಯೇಶ್ವರ, ನನ್ನ ಜೀವನದ ಸರ್ವಸ್ವನೇ, ನಾನು ಎಲ್ಲ ರೀತಿಯಿಂದಲೂ ಅಯೋಗ್ಯ ಅಸಮರ್ಥನಾಗಿದ್ದೇನೆ. ಆದರೂ ನೀನು ಪರಮದಯಾಲು ಆಗಿದ್ದೀಯೆ. ನಿನಗಂತೂ ನನ್ನ ಮೇಲೆ ದಯೆ ತೋರಿಸದೇ ಇದ್ದುಬಿಡಲು ಆಗುವಂತಿಲ್ಲ. ನೀನು ನನ್ನ ಹೃದಯದ ಒಂದೊಂದು ಮಾತು ಹಾಗು ನನ್ನ ಕಣ ಕಣವನ್ನು ತಿಳಿದಿದ್ದೀಯೆ. ನನ್ನ ಮನಸ್ಸು ನಿನ್ನ ದರ್ಶನಕ್ಕಾಗಿ ಬಾಯಾರಿದೆ, ನಿನಗಾಗಿ ಒದ್ದಾಡುತ್ತಿದೆ. ಎಲ್ಲಿ ಬಚ್ಚಿಟ್ಟುಕೊಂಡಿದ್ದೀಯ ? ನಾನು ಅಪರಾಧಿ ಎಂದು ಕೋಪಿಸಿಕೊಂಡಿದ್ದೀಯಾ!! ಪ್ರಭುವೇ! ಪ್ರಭುವೇ! ನನ್ನ ಅಪರಾಧಗಳನ್ನು ನೀನು ನೋಡುತ್ತಾ ಹೋದರೆ ಕೋಟಿ ಕಲ್ಪ ಕಳೆದರೂ ನಾನು ದಾಟಲಾರೆನು. ಆದ್ದರಿಂದ ಓ ಕರುಣಾಸಾಗರ ! ನಿನ್ನ ಅಕಾರಣಕರುಣೆಯ ಒಂದು ಕಣ, ಒಂದು ಬಿಂದುವನ್ನಾದರೂ ನನ್ನ ಮೇಲೆ ಹಾಕು. ನಾನು ನಿನ್ನ ಚರಣಕಮಲದ ಮೇಲೆ ನನ್ನ ತಲೆ ಇಡುತ್ತೇನೆ ಮತ್ತೆ ನೀನು ನಿನ್ನ ಕರಕಮಲವನ್ನು ನನ್ನ ಶಿರಸ್ಸಿನ ಮೇಲೆ ಇಟ್ಟುಬಿಡು. ನಾನು ನನ್ನ ತುಂಬಿದ ಎದೆಯಿಂದ ಒದ್ದೆ ಕಣ್ಣಿನಿಂದ ನಿನ್ನೆಡೆಗೆ ನೋಡಿದಾಗ ನೀನು ಮೃದು ಮೃದುವಾಗಿ ಮುಗುಳುನಗು, ಮತ್ತೆ ನಿನ್ನ ಮಧುರಮಧುರವಾದ ಸ್ವರದಿಂದ ಅಮೃತ ಸುರಿಸುತ್ತಾ ‘ನೀನು ನನ್ನವ, ನನ್ನ ನಿನ್ನ ಸಂಬಂಧ ಅಖಂಡ- ಮುರಿಯಲಾಗದ್ದು’ ಎಂದು ಹೇಳು, ಸಾಕು ನನಗಷ್ಟೇ ಸಾಕು ನನಗೆ ಬೇರಿನ್ನೇನೂ ಬೇಡ.
೧೦. ಅಹಾ! ಇದು ವೃಂದಾವನ! ಕಾಳಿಂದಿಯ ದಡ, ಹಸಿರು ಮರದ ಸಾಲುಗಳು, ಹೂಬಿಟ್ಟ ಬಳ್ಳಿಗಳು, ಲಲಿತವಾದ ಹೂಗೊಂಚಲುಗಳು, ಆದರೆ ಪ್ರಾಣಪ್ರಿಯ, ನೀನಿಲ್ಲದೆ ಎಲ್ಲಾ ಶೂನ್ಯಶೂನ್ಯವಾಗಿ ತೋರುತ್ತಿದೆ. ಕ್ಷಣ ಕ್ಷಣ ಯುಗದಂತೆ ಕಾಣುತ್ತಿದೆ. ಹೃದಯ ವ್ಯಾಕುಲವಾಗುತ್ತಿದೆ. ಅಳು ನಿಲ್ಲುತ್ತಿಲ್ಲ. ಈ ಹೂವಿನ ಮಂಚ ನಿನಗಾಗಿ. ಸುಂದರ ಸುಂದರ ಹೂವಿನಮಾಲೆ ನಿನಗಾಗಿ ಕಟ್ಟಿದೆ. ಭಾವಜಲದಿಂದ ತುಂಬಿದ ನನ್ನ ಹೃದಯದ ಝರಿ ನಿನ್ನ ಕಾಲನ್ನು ಹರಿದು ತೊಳೆಯುವದಕ್ಕೆ ಇದೆ. ಆದರೆ ಹಾ! ಹಾ! ನೀನು ಇಲ್ಲಿಯವರೆಗೂ ಬರಲಿಲ್ಲ. ಹೃದಯ ಒಡೆದುಹೋಗುತ್ತಿದೆ, ಪ್ರಾಣ ಒಣಗುತ್ತಿದೆ. ಇನ್ನು ಒಂದು ಕ್ಷಣವೂ ಇರಲಾರೆ. ನನ್ನ ಜ್ಞಾನ ತಪ್ಪುತ್ತಿದೆ, ಮೂರ್ಛಿತನಾಗುತ್ತಿದ್ದೇನೆ. ಪ್ರಭೋ ಬಾ ಬಾ! ನನ್ನ ಹತ್ತಿರ ಬಾ! ನನ್ನೆದುರು ಪ್ರಕಟನಾಗು. ನನ್ನೆಡೆಗೆ ನೋಡು. ನನ್ನ ಸೇವೆಯನ್ನು ಸ್ವೀಕರಿಸು! ನಿನ್ನವನಾಗಿಸಿಕೊ ನೀನು ನನ್ನವನಾಗು.
ಭಗವಂತನ ಆಗಮನ.
೧೧. ಈ ಸ್ಥಾನವೆಲ್ಲಾ ದಿವ್ಯಗಂಧದಿಂದ ತುಂಬಿಕೊಳ್ಳುತ್ತಾ ಇದೆ! ಈ ಮಧುರಮಧುರ ಸ್ವರತರಂಗ ಎಲ್ಲಿಂದ ಬರುತ್ತಾ ಇದೆ ? ತಂಪು-ತಂಪಾದ ದಿವ್ಯ ಪ್ರಕಾಶ ತುಂಬಿಕೊಳ್ಳುತ್ತಾ ಇದೆ. ಕಾಲ್ಗೆಜ್ಜೆಯ ಇಂಪಾದ ಶಬ್ದಕೇಳಿಬರುತ್ತಿದೆ. ಹಾಗಾದರೆ ಬಂದೇಬಿಟ್ಟನೇ ? ನನ್ನ ಜನ್ಮಜನ್ಮಗಳ ಆಸೆ ಪೂರೈಸುವ ಸಂದರ್ಭ ಬಂದೇಬಿಟ್ಟಿತು. ಧನ್ಯ ಧನ್ಯ , ಅವನೇ. ಹೌದು ಅವನೇ ಹೌದು. ಆಹಾ! ಎಂಥಾ ಗಂಭೀರನಡೆಯಿಂದ ನಡೆದುಬರುತ್ತಿದ್ದಾನೆ. ಓರೆಗಣ್ಣಿನಿಂದ ನೋಡುತ್ತಿದ್ದಾನೆ. ನನ್ನೆಡೆಗೆ ನೋಡುನೋಡುತ್ತಾ ಮೆಲ್ಲಮೆಲ್ಲಗೆ ಮುಗುಳ್ನಗುತ್ತಿದ್ದಾನೆ. ಬಾ ಪ್ರಭುವೇ ಬಾ. ನನ್ನ ಯುಗ ಯುಗದ ಇಚ್ಛೆಯನ್ನು ಪೂರೈಸು.
೧೨. ಈಶ್ವರನಂತೂ ಹೃದಯದಲ್ಲೇ ಇರುತ್ತಾನೆ. ಎಲ್ಲೂ ಹೋಗುವದೂ ಇಲ್ಲ. ಮತ್ತೆಲ್ಲಿಂದಲೋ ಬರುವದೂ ಇಲ್ಲ. ಮನಸ್ಸು, ಅವನ ಸಮ್ಮುಖವಾದ ಕೂಡಲೇ ಅವನು ಬಂದುಬಿಡುತ್ತಾನೆ. ವಿಮುಖವಾದ ಕೂಡಲೇ ಹೊರಟುಹೋಗುತ್ತಾನೆ. ಆದ್ದರಿಂದಲೇ ಮನಸ್ಸನ್ನು ಅವನ ಸಮ್ಮುಖವಾಗಿಯೇ ಇಟ್ಟುಕೊಳ್ಳಬೇಕು. ವಿಶೇಷವಾಗಿ ಅವನ ಮುಖಕಮಲದ ಮುಗುಳ್ನಗೆ ಮತ್ತು ಅವನ ದೃಷ್ಟಿಯ
ಧ್ಯಾನ ಮಾಡಬೇಕು. ಭಗವಂತನ ಮನಸ್ಸಿನಲ್ಲಿ ಅತ್ಯಂತ ಆನಂದವಿದೆ ಮತ್ತದು ಅವನ ಮುಖಾರವಿಂದದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಬರುತ್ತಾ ಇದೆ. ಕಣ್ಣುಗಳ ದೃಷ್ಟಿ ಸೇರುತ್ತಾ ಇದೆ ಮತ್ತು ನೋಡುವವನು ಕೂಡ ಆನಂದದಿಂದ ತುಂಬಿ ಹೋಗುತ್ತಿದ್ದಾನೆ. ಈ ರೀತಿ ಎರಡೂ ಕಡೆಯಿಂದಲೂ ಆನಂದದ ತರಂಗ ಏಳುವದೇ
ಭಗವಂತನ ಸ್ವಾಗತ ಎಲ್ಲಿ ಈ ಆನಂದದ ಸ್ವಾಗತವಾಗುತ್ತದೆಯೋ ಭಗವಂತನು ಅಲ್ಲಿಗೆ ಬರುತ್ತಾನೆ ಮತ್ತು ನೆಲೆಸುತ್ತಾನೆ.
೧೩. ಮನವು ಭಗವಂತನ ಸಮ್ಮುಖವೇನೋ ಆಯಿತು ಆದರೆ ಅವನಲ್ಲೇ ಅಂಟಿಕೊಂಡಿರುವದಿಲ್ಲ. ಆಗ ಭಗವಂತನು ಕುಳಿತಿರುವದಾದರೂ ಎಲ್ಲಿ ? ಆದ್ದರಿಂದ, ಶೀತಲಸ್ಥಾನದಲ್ಲಿ ಕೋಮಲ ಕಮಲದ ಮೇಲೆ ಸ್ಥಿರವಾದ ಆಸನವನ್ನು ನೀಡಬೇಕು.
ಶೀತಲ ಎಂದರೆ ಮನಸ್ಸಿನಲ್ಲಿ ಯಾವದೇ ಈರ್ಷ್ಯೆ ಇರಬಾರದು ಎಂದರ್ಥ. ಕೋಮಲ ಎಂದರೆ ಸ್ನೇಹದಿಂದ ನಯವಾಗಿ, ಮೃದುವಾಗಿರುವದು ಎಂದರ್ಥ. ಸ್ಥಿರ ಎಂದರೆ ಮನಸ್ಸಿನ ಚಾಂಚಲ್ಯವಿರದಿರುವದು ಎಂದರ್ಥ. ಅಲುಗಾಡುವ ಆಸನ ಒಳ್ಳೆಯದಲ್ಲವಲ್ಲವೆ.
೧೪. ಸ್ನೇಹದ ಜಲ, ಶ್ರದ್ಧೆಯ ಹೂವು, ಭಾವದ ಅಕ್ಷತೆ, ಸದ್ಗುಣಗಳ ಸುಗಂಧ, ಸಂಬಂಧದ ಮಧು ತೆಗೆದುಕೊಂಡು ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಮುಂತಾದ ಕ್ರಿಯೆಗಳನ್ನು ಮಾಡಬೇಕು.
ಪಾದ್ಯ - ಭಗವಂತನ ಕಾಲನ್ನು ಪ್ರೇಮದಿಂದ ತೊಳೆಯುವದು.
ಅರ್ಘ್ಯ - ಭಗವಂತನ ಕರಕಮಲದಲ್ಲಿ ನೀರು, ಹೂವು, ದೂರ್ವೆ ಇತ್ಯಾದಿಗಳನ್ನು ಅರ್ಪಿಸಿ ಕೈಗಳನ್ನು ತೊಳೆಸುವುದು.
ಆಚಮನೀಯ- ಮುಖವನ್ನು ತೊಳೆಸುವುದು.
ಮಧುಪರ್ಕ- ಸತ್ಕಾರದ ಒಂದು ರೀತಿ. ಇದನ್ನು ಆದರಣಿಯ ವ್ಯಕ್ತಿಗಳಿಗೆ ಜೇನನ್ನು ನೀಡಿ ಮಾಡಲಾಗುವದು. ಭಗವಂತನ ಪೂಜೆಯಲ್ಲಿ ಅವನೊಂದಿಗೆ -- ತಾಯಿ, ತಂದೆ, ಒಡೆಯ, ಗಂಡ, ಮಗ, ಗುರು ಮುಂತಾದ ಯಾವ ಮಧುರವಾದ ಸಂಬಂಧವಿದೆಯೋ ಅದೆ ಜೇನಿನ ಮಧುರತೆಗೆ ಸಮಾನವಾದದ್ದಾಗಿದೆ.
೧೫. ಭಗವಂತ ನಿತ್ಯ ಶುದ್ಧನು. ಅವನಿಗೆ ಸ್ನಾನದ ಆವಶ್ಯಕತೆ ಇಲ್ಲ. ಮಾಯೆಯ ಮೈಲಿಗೆ ಅವನನ್ನು ಮುಟ್ಟಲಾಗದು, ಆದರೂ ಭಕ್ತರ ಸೇವೆಯನ್ನು ಸ್ವೀಕರಿಸಿ ಅವರಿಗೆ ಸಂತೋಷವನ್ನು ಉಂಟುಮಾಡುವದಕ್ಕಾಗಿ ಅವರ ಕೈಗಳಿಂದ
ಸ್ನಾನವನ್ನು ಮಾಡುತ್ತಾನೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಶುದ್ಧಜಲದಿಂದ ಸ್ನಾನಮಂಟಪದಲ್ಲಿ ರತ್ನಸಿಂಹಾಸನದಿಂದಲ್ಲಿ ಕೂರಿಸಿ ಸ್ನಾನವನ್ನು ಮಾಡಿಸಬೇಕು. ಭಗವಂತನು ಚಿನ್ಮಯನಾದ್ದರಿಂದ ಅವನು ಎಲ್ಲಿರುತ್ತಾನೊ ಅಲ್ಲಲ್ಲಿಯೆ ಹೊಸಹೊಸದಾದ ಸ್ನಾನಮಂಟಪ, ಶೃಂಗಾರಮಂಟಪ, ಭೋಜನಮಂಟಪ, ಶಯನ ಮಂಟಪ, ವಿಹಾರ ಮಂಟಪ, ಸಭಾಮಂಟಪ ಮುಂತಾದವುಗಳು ಕಾಲ ಕಾಲಕ್ಕೆ ತಾವೇ ಪ್ರಕಟವಾಗುತ್ತಿರುವವು. ಭಗವಂತನಿಗೆ ಚಳಿ ಮತ್ತು ಶೆಖೆ ಕೂಡ ಭಾಸವಾಗುತ್ತವೆ. ಭಗವಂತನ ಭಾವವನ್ನು ಅವನ ಕಣ್ಣು ಮತ್ತು ಇಂಗಿತದಿಂದ ಅರ್ಥೈಸಿಕೊಂಡು ಅಥವಾ ಅವನ ಆಜ್ಞಾನುಸಾರವಾಗಿ ತಂಪಾದ ಅಥವಾ ಬಿಸಿ ನೀರಿನಿಂದ ಸ್ನಾನವನ್ನು ಮಾಡಿಸಬೇಕು. ಮಾನಸಪೂಜೆಯಲ್ಲಿ ಸ್ನಾನವನ್ನು ಮಾಡಿಸದಿದ್ದರೂ ಯಾವದೇ ತೊಂದರೆಯೂ ಇಲ್ಲ.
೧೬. ಭಗವಂತನ
ವಸ್ತ್ರವು ಕೂಡ ಐದುಬಣ್ಣಗಳಿಂದ ಕೂಡಿರಬೇಕು, ಪೃಥ್ವಿಯ ಹಳದಿ, ಜಲದ ಶ್ವೇತ, ಅಗ್ನಿಯ ಕೆಂಪು, ವಾಯುವಿನ ನೇರಳೆ, ಮತ್ತು ಆಕಾಶದ ನೀಲಿ. ಎಲ್ಲಾ ತತ್ತ್ವಗಳ ಯಾವ ಶ್ರೇಷ್ಠವಾದ ಮತ್ತು ಸಾರವಾದ ಅಂಶವಿದೆಯೋ ಅವನ್ನು ತೆಗೆದುಕೊಂಡು ಬಣ್ಣವು ಉಂಟಾಗುತ್ತದೆ. ಅಹಂಕಾರದ ಹತ್ತಿ, ಬುದ್ಧಿಯೆಂಬ ದಾರ, ಮನಸ್ಸಿನ(ಅಂಟಿಕೊಳ್ಳುವ ಸ್ವಭಾವದ)ಲ್ಲಿರುವ ಅಂಟು, ಐದು ತತ್ತ್ವಗಳ ಬಣ್ಣ ಇವುಗಳಿಂದ ವಸ್ತ್ರವನ್ನು ಮಾಡಿ ಭಾವದಿಂದ ಧಾರಣೆ ಮಾಡಿಸಬೇಕು. ಸಂಬಂಧವೆಂಬ
ಯಜ್ಞೋಪವೀತ, ಅನುರಾಗವೆಂಬ
ಅಂಗರಾಗ, ಶೀತಲತೆ ಎಂಬ
ಚಂದನ ಮತ್ತು ಚೈತನ್ಯದ
ಒಡವೆಗಳು (
ಆಭರಣ) ಹಾಗೆಯೇ ಭಾವವೆಂಬ ಐದುಬಣ್ಣಗಳ
ಹೂಮಾಲೆ ಇವುಗಳನ್ನು ತೊಡಿಸಿ ಭಗವಂತನಿಗೆ ತನ್ನ ಹೃದಯದ ದರ್ಪಣ ತೋರಿಸಬೇಕು.
೧೭. ಮೂರು ಗುಣಗಳ
ಧೂಪವನ್ನು ಹೊತ್ತಿಸಿ ಅದರಲ್ಲಿ ಯಾವ ವ್ಯಾಪಕ ಬ್ರಹ್ಮನ ಸತ್ತೆಯಿದೆಯೋ ಅದರ ಹರಡಿದ ಸುಗಂಧದ ಅನುಭವ ಮಾಡಿಕೊಳ್ಳಬೇಕು ಮತ್ತು ಜ್ಞಾನದ
ದೀಪವನ್ನು ಹೊತ್ತಿಸಿ ಅದರ ಪ್ರಕಾಶದಲ್ಲಿ ಭಗವಂತನ ಝಗಮಗಿಸುತ್ತಿರುವ ಆಭರಣ ಮತ್ತು ಹೊಳೆಯುತ್ತಿರುವ ದೇಹಕಾಂತಿಯನ್ನು ನೋಡಿ ಆನಂದಿತನಾಗಬೇಕು.
೧೮. ಪೃಥಿವಿಯ ಸುಗಂಧ, ಜಲದ ಮಧುರತೆ, ಅಗ್ನಿಯ ಸೌಂದರ್ಯ, ವಾಯುವಿನ ಕೋಮಲ ಸ್ಪರ್ಶ ಇವೆಲ್ಲವನ್ನು ಸೇರಿಸಿ ಹೃದಯಾಕಾಶದಲ್ಲಿ ಭಾವದಿಂದ ಬೇಯಿಸಿದ ಪ್ರೇಮದ
ನೈವೇದ್ಯವನ್ನು ಭಗವಂತನಿಗೆ ತೋರಿಸಬೇಕು. ಭಗವಂತನು ನೋಡಿ ಸೇವಿಸಿ ಪ್ರಸನ್ನನಾಗುತ್ತಾನೆ. ಯಾವದಾದರು ಪದಾರ್ಥವು ಇಷ್ಟವಾದರೆ ಸ್ವಲ್ಪ ಹೆಚ್ಚು ಕೇಳುತ್ತಾನೆ. ಕೆಲವೊಮ್ಮೆ ಅವನ ದೃಷ್ಟಿಯನ್ನು ಕಣ್ಣು ಸಂಧಿಸಿದಾಗ ಅವನ ಪ್ರಸನ್ನತೆಯನ್ನು ನೋಡಿ ತನ್ನ ಹೃದಯ ಆನಂದದಿಂದ ತುಂಬಿ ಹೋಗುತ್ತದೆ. ಅವನ ಸುಖದಲ್ಲಿಯೇ ತನ್ನ ಸುಖವಿದೆ. ನಂತರ ಬಾಯಿ ಘಮಗೊಡಲು ಸುಗಂಧ ಪದಾರ್ಥವನ್ನು ಕೊಡಬೇಕು
(ತಾಂಬೂಲ).
೧೯. ಲೋಕದ ಎಲ್ಲಾ ಬಾಹ್ಯ ಸಂಪತ್ತು, ಶರೀರ, ಪ್ರಾಣ, ಇಂದ್ರಿಯ, ಮನಸ್ಸು- ಮನಸ್ಸಿನಲ್ಲಿರುವ ಸಂಕಲ್ಪ, ಅಹಂಕಾರ, ಮಮತೆ, ಸಂಬಂಧ ಮುಂತಾದ ಎಲ್ಲವು, ಹಾಗೆಯೇ ಬುದ್ಧಿ- ಅದರಲ್ಲಿರುವ ವಿಚಾರ, ನಿಶ್ಚಯ ಮುಂತಾದವು, ಜೀವನು ಮೊದಲು ಹೇಗೆ ಇದ್ದ, ಈಗ ಹೇಗಿರುವನು, ಮುಂದೆ ಏನಾಗುವನು ಇವೆಲ್ಲವು ಭಗವಂತನೇ ಹೌದು. ಈ ಸತ್ಯ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವದು, ಒಪ್ಪಿಕೊಳ್ಳುವದು ಮತ್ತು ನೆನಪಿಟ್ಟುಕೊಳ್ಳುವದು, ಎಂದೆಂದೂ ಮರೆಯದಿರುವದು- ನಿರಂತರ ಅನುಭವವಾಗುವದು ಇದೇ ಭಗವಂತನಿಗೆ ಮಾಡುವ
ಆತ್ಮಸಮರ್ಪಣ.
೨೦.
ಆರತಿಯಲ್ಲಿ ಐದು ವಸ್ತುಗಳು ಇರುತ್ತವೆ. ಪೃಥಿವಿಯ ಗಂಧ, ಜಲದ ಸ್ನೇಹಧಾರೆಯಾದ ತುಪ್ಪ, ಅಗ್ನಿಯ ಜ್ವಾಲೆ, ವಾಯುವಿನ ಅಲುಗಾಟ, ಆಕಾಶದ ಧ್ವನಿ. ಈಡೀ ಜಗತ್ತಿನಿಂದಲೇ ಭಗವಂತನ ಆರತಿಯಾಗುತ್ತದೆ. ಹಾಗೆಯೇ ತನ್ನ ದೇಹವೆಂಬ ದೀಪ, ಜೀವನದ ತುಪ್ಪ, ಪ್ರಾಣವೆಂಬ ಬತ್ತಿ, ಆತ್ಮವೆಂಬ ಜ್ವಾಲೆ ಇವುಗಳನ್ನಿಟ್ಟು ಭಗವಂತನ ಸೂಚನೆಯಂತೆ ಕುಣಿಯುವದು ಇದೇ ಆರತಿಯಾಗಿದೆ. ಈ ರೀತಿಯ ನಿಜವಾದ ಆರತಿಯನ್ನು ಮಾಡುವದರಿಂದ ಸಂಸಾರಬಂಧನ ಮುರಿದು ಹೋಗುತ್ತದೆ ಮತ್ತು ಜೀವನಿಗೆ ಭಗವಂತನ ದರ್ಶನವುಂಟಾಗಲು ಮೊದಲಾಗುತ್ತದೆ.
ಈಶ್ವರನಿಗೆ ನಮ್ಮ ಮನದಲ್ಲಿ ಯಾವ ಉತ್ತಮೋತ್ತಮ ಭಾವಗಳು ಹುಟ್ಟುವದಕ್ಕೆ ಶುರುವಾಗುತ್ತದೆಯೋ ಅದೇ ಪುಷ್ಪ. ಕೆಲವೊಮ್ಮೆ ಅವನ ಅಸ್ತಿತ್ವದ ಅನುಭವ ಮಾಡಿಕೊಂಡು ಶಾಂತನಾಗುವದು, ಕೆಲವೊಮ್ಮೆ ಅವನ ಸೇವೆಮಾಡುವದು, ಕೆಲವೊಮ್ಮೆ ಅವನೊಂದಿಗೆ ಮಿತ್ರನಂತೆ ನಗುವದು-ಆಟವಾಡುವದು, ಮಾತನಾಡಿಸುವದು, ಕೆಲವೊಮ್ಮೆ ಮುಗ್ಧವಾದ ಶಿಶುವಿನಂತೆ ವಾತ್ಸಲ್ಯದಿಂದ ಉಣ್ಣಿಸುವದು, ನೀರು ಕುಡಿಸುವದು, ಮುದ್ದುಮಾಡುವದು, ಕೆಲವೊಮ್ಮೆ ಪತ್ನಿಯ ಸಮಾನವಾಗಿ ಪ್ರೇಮಿಸುವದು - ಇವೆಲ್ಲವುಗಳೆ ಭಾವವಾಗಿದೆ. ಈ ಭಾವಗಳನ್ನೇ ಮತ್ತೆ ಮತ್ತೆ ಭಗವಂತನ ಜೊತೆಗೆ ಸೇರಿಸುವದು ಇದನ್ನೇ ಪುಷ್ಪಾಂಜಲಿ ಎನ್ನುತ್ತಾರೆ. ಇವೆಲ್ಲವನ್ನು ಮಾಡುತ್ತಾ ಮಾಡುತ್ತಾ ಆನಂದಸಮುದ್ರದಲ್ಲಿ ಮುಳುಗುತ್ತ ಹೋಗುವಂತೆ ಭಗವಂತನನ್ನೇ ಸೇರಿಬಿಡುವದು. ಈ ರೀತಿ ಮುಳುಗುವದು ಮತ್ತು ಅವನಲ್ಲೇ ತೇಲುವದು ಇದೇ ಭಗವಂತನ ಮಾನಸಿಕ ಸೇವೆ-ಪೂಜೆ.