Saturday, October 4, 2014

ಪ್ರಿಯ ಕೃಷ್ಣ - ಭಕ್ತಿಸರ್ವಸ್ವ; ಬೃಂದಾವನದ ಅಖಂಡಾನಂದರ ಸಾಹಿತ್ಯಮಾಲೆ

ಪ್ರಿಯ ಕೃಷ್ಣ 

ಅಖಂಡಾನಂದಸರಸ್ವತೀ ಅವರ ಭಕ್ತಿಸರ್ವಸ್ವ ಪುಸ್ತಕದ ಹಿಂದೀ ಲೇಖನಕ್ಕೆ ಒಬ್ಬ ಮಹಾತ್ಮರ ಕನ್ನಡಾನುವಾದ​.

ಶ್ರೀಕೃಷ್ಣ​! ನಾನರಿಯೆ, ಎಂದಿನಿಂದ ನಿನ್ನನು ನಾನು ಬಿಟ್ಟಿದ್ದೆನೆಂದು. ಸ್ವಲ್ಪ ಮಟ್ಟಿಗೆ ಅರಿತರೂ ಸರಿಯಾಗಿ ನೆನಪಾಗುತ್ತಲಿಲ್ಲ​. ಯುಗಯುಗಗಳು ಕಳೆದಿವೆ; ಜನ್ಮ ಜನ್ಮಗಳೇ ಕಳೆದು ಹೋಗಿವೆ. ಒಮ್ಮೆ ತೃಣವಾಗಿ ಜನರ ಪಾದದಡಿಯಲ್ಲಿ ತುಳಿಯಲ್ಪಟ್ಟಿದ್ದೆನು. ಒಮ್ಮೆ ಕಾಷ್ಠವಾಗಿ ಅಗ್ನಿಯಲ್ಲಿ ದಗ್ಧವಾಗಿ ಹೋಗಿದ್ದೆನು. ಕೆಲವೊಮ್ಮೆ ಹುಳಕೀಟಗಳಾಗಿ ಜನರನ್ನು ಪೀಡಿಸುತ್ತಿದ್ದೆನು. ಒಮ್ಮೊಮ್ಮೆ ಸಮುದ್ರದ ಭಯಂಕರವಾದ ಅಲೆಗಳ ಮೇಲೆ ತೇಲುತ್ತಿದ್ದೆನು. ಮತ್ತೆ ಕೆಲವೊಮ್ಮೆ ಅನೇಕ ಪಶುಪಕ್ಷಿಗಳ ಯೋನಿಯಲ್ಲಿ ಹುಟ್ಟಿ ಜನರ ಹೊಡೆತಕ್ಕೆ ಬಲಿಯಾಗಿದ್ದೆನು. ಯಾರು ಯಾರನ್ನೆಲ್ಲ ಕರೆದಿದ್ದೆನೋ, ಯಾರ ಚರಣಗಳನ್ನೆಲ್ಲ ಶರಣು ಹೊಕ್ಕಿದ್ದೆನೋ ನಾನರಿಯೆ. ಆದರೆ ಇದಂತೂ ನಿಶ್ಚಯ​, ನಿನ್ನನು ಮಾತ್ರ ಒಮ್ಮೆಯೂ ಕೂಗಿ ಕರೆಯಲಿಲ್ಲ​. ಎನಿತು ಸಲವೋ ಸ್ತ್ರೀಯಾಗಿ, ಜನರ ಭೋಗ್ಯವಸ್ತುವಾದೆನೋ ಮತ್ತೆಷ್ಟು ಸಲವೋ ಪುರುಷನಾಗಿ, ಎಷ್ಟು ಮಂದಿಯರ ಹೊಗಳುಭಟ್ಟನಾಗಿದ್ದೆನೋ ಎಂದು ನಾನರಿಯೆ. ಶ್ರೀಕೃಷ್ಣ​! ಒಮ್ಮೆಯಾದರೂ ನಾನು ನಿಜವಾಗಿ, ಮನಃಪೂರ್ವಕವಾಗಿ ನಿನ್ನನು ಶರಣು ಹೊಗಲಿಲ್ಲ​. ಒಮ್ಮೆಯೂ ನಿನ್ನನು ಆರ್ತಸ್ವರದಿಂದ ಕರೆಯಲಿಲ್ಲ​. ಏನು ಹೇಳಲಿ, ಕರೆಯಬೇಕೆನ್ನುವ ಇಚ್ಛೆಯೂ ಕೂಡ ಬಂದಿರಲಿಲ್ಲವಲ್ಲ​. ಅಮೃತವೆಂದೆಣಿಸಿ, ನಾನು ಕಾದಿರುವ ಕಬ್ಬಿಣದ ದ್ರವವನ್ನೇ ಪಡೆಯಲು ಓಡಿದೆ. ಅದರಿಂದ ಸುಟ್ಟು ಹೋಗಿ ಚಿನ್ನದ ದ್ರವವನ್ನು ಕುರಿತು ಓಡಿದೆ. ಅಲ್ಲಿಂದ ತಿರುಗಿ, ಲವಣಸಮುದ್ರಕ್ಕೆ ನೆಗೆದೆ. ಅಲ್ಲಿಯೂ ಹಸಿವು ಬಾಯಾರಿಕೆಯನ್ನು ಹೊಂದುತ್ತ ಜಲಚರಗಳ ಹೊಡೆತಗಳನ್ನು ತಿಂದೆ. ಎಲ್ಲಿಗೆ ತಾನೇ ಹೋಗಲಿಲ್ಲ​? ಯಾರ ಬಾಗಿಲಿಗೆ ತಾನೇ ತಲೆಯನ್ನು ಕುಟ್ಟಿಕೊಳ್ಳಲಿಲ್ಲ​. ಆದರೆ ಅಯ್ಯೋ ನನ್ನ ದುರ್ಬುದ್ಧಿಯೇ, ಒಮ್ಮೆಯಾದರೂ ನೀನು ನಿಜವಾದ ಸ್ವಾಮಿಯನ್ನು ಸ್ಮರಿಸಲೇ ಇಲ್ಲವಲ್ಲ​!

ಇದೆಲ್ಲವೂ ನಡೆಯುತ್ತಿತ್ತು. ಆದರೆ ಈ ಎಲ್ಲ ಬಾರಿ ಬಾರಿಯ ಭ್ರಮಣದಲ್ಲಿಯೂ ಒಂದು ಪ್ರೇರಣೆಯಿತ್ತು, ಶ್ರೀಕೃಷ್ಣನದು. ಹೌದು ಶ್ರೀಕೃಷ್ಣ​, ನಿನ್ನದೇ ಪ್ರೇರಣೆಯಿತ್ತು. “ನಾನು ನಿಜವಾದ ಸುಖವನ್ನು ಪಡೆಯುವೆನು, ನಿಜವಾದ ಶಾಂತಿಯನ್ನು ಪಡೆಯುವೆನು ಮತ್ತು ನನ್ನ ಸ್ವಾಮಿಯ ಸನ್ನಿಧಿಗೆ ತೆರಳಿ ನನ್ನ ಪ್ರಿಯತಮನನ್ನು ಅಪ್ಪಿಕೊಂಡು, ಶಾಶ್ವತವಾಗಿ ಅವನ ಹೃದಯದೊಡನೆ ಕೂಡಿಕೊಳ್ಳುವೆನು-ಒಂದಾಗಿ ಬಿಡುವೆನು” ಎಂಬ ಪ್ರೇರಣೆಯನ್ನೇ ನೀನು ಹೃದಯದಲ್ಲಿದ್ದುಕೊಂಡು ಮಾಡುತ್ತಿದೆ. ಇಚ್ಛೆಯು ನಿನ್ನದೇ ಕೊಡುಗೆಯಾಗಿತ್ತು. ಆದರೆ ನಾನು ಎಷ್ಟರ ಮಟ್ಟಿಗೆ ಉನ್ಮತ್ತನಾಗಿದ್ದೆನೆಂದರೆ ಈ ಹಂಬಲವೂ ಯಾರಿಂದ ಒದಗಿದೆ ಎಂದು ತಿಳಿಯದೇ ಇದ್ದೆ. ಮತ್ತು ಯಾರ ಬಳಿಗೆ ಹೋದರೆ ಈ ಬಯಕೆಯು ಈಡೇರುವದು ಎಂಬುದನ್ನೂ ಅರಿಯುತ್ತಿರಲಿಲ್ಲ​. ಅರಿಯದೆಯೇ ನಾನು ಅಜ್ಞಾತಪಥದಲ್ಲಿ ನಡೆಯಲಾರಂಭಿಸಿದ್ದೆ. ಅಲ್ಲಿಯೇ, ವಿಷಯಗಳಿಂದ ಸುಖಶಾಂತಿಗಳನ್ನು ಹುಡುಕಲಾರಂಭಿಸಿದ್ದೆ, ಎಲ್ಲಿ ಕನಸಿನಲ್ಲಿಯೂ ಕೂಡ ಅವುಗಳ ದರ್ಶನವೂ ದೊರೆಯಲಾರದೋ, ಅಲ್ಲಿ.

ಆದರೆ ನಾನೀಗ ತಿಳಿದುಕೊಂಡೆ. ನಾನು ತಿಳಿದುಕೊಂಡೆನೆಂದು ಹೇಗೆ ಹೇಳಲಿ. ನಿನ್ನ ಪ್ರೇಮಿಗಳಿಂದ ಕೇಳುತ್ತಿರುವೆನು. ನನ್ನ ಇಚ್ಛೆಯು, ಅನಂತ ಆನಂದದ ಮತ್ತು ಸುಖದ ಅಭಿಲಾಷೆಯು, ನಿಜವಾದದ್ದೇ ಎಂದು ನಿನ್ನ ಪ್ರೇಮಿಯರು ನಿನ್ನ ಯಾವ ಸಂದೇಶವನ್ನು ಹೇಳಿದ್ದಾರೋ, ಅದರಿಂದ ಊಹಿಸಿರುವೆನು. ಆದರೂ ಕೂಡ ನನ್ನ ಮಾರ್ಗವು ಸರಿಯಾಗಿರಲಿಲ್ಲ​. ಮರುಭೂಮಿಯಲ್ಲಿ ನಾನು ನೀರನ್ನು ಹುಡುಕುತ್ತಾ ಇದ್ದೆ. ಪ್ರಪಂಚದಲ್ಲಿಯೇ ಸುಖ ದೊರೆವುದೆಂದು ತಿರುಗುತ್ತಿದ್ದೆ. ಅಯ್ಯೋ! ಪ್ರಪಂಚದಲ್ಲಿ ಎಲ್ಲಿ ತಾನೇ ಸುಖ ಸಿಕ್ಕೀತು? ತಿರುಗುತ್ತಿದ್ದೆ. ಬಹಳವಾಗಿಯೇ ತಿರುಗುವದಾಯಿತು. ಗೊತ್ತಾಯಿತು, ಸುಖವು ನಿನ್ನ ಚರಣಗಳಲ್ಲಿಯೇ ಇದೆ ಎಂದು. ಈಗ​, ಪ್ರಭುವೇ! ನಿನ್ನ ಚರಣಗಳಿಗೆ ಬಂದಿದ್ದೇನೆ. ಈ ನಿನ್ನ ರಕ್ತವರ್ಣಪದತಲಗಳು, ಕಮಲಕ್ಕಿಂತಲೂ ಕೋಮಲವಾದ ಈ ನಿನ್ನ ಚರಣಗಳು, ಸರ್ವದಾ ನನ್ನ ಹೃದಯದಲ್ಲಿ ಸ್ನಿಗ್ಧವಾಗಿರಲಿ. ಇವುಗಳ ಶೀತಲದಿಂದ​, ನನ್ನ ಹೃದಯದಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿರುವ ಅಗ್ನಿಯು ಶಮನವಾಗಿಲಿ. ಪ್ರಿಯತಮನೇ, ಒಂದು ಸಲ ನನ್ನ ವಕ್ಷಸ್ಥಲದಲ್ಲಿ ನಿನ್ನ ಚರಣಗಳನ್ನು ಇಟ್ಟುಬಿಡಪ್ಪ​!, ಇಟ್ಟುಬಿಡು!, ನನ್ನ ಈ ಒಂದು ಮಾತನ್ನು ಕೇಳಿಬಿಡು.

ಅಯ್ಯೋ! ನಾನೆಷ್ಟು ಮೂರ್ಖ​. ಹೃದಯದಾಳದಲ್ಲಿ ಈಗಲೂ ವಿಷಯದ ಹಂಬಲಿಕೆಯಿದೆ. ಆದರೂ ಬರಿಯ ಬಾಯಿಮಾತಿನಿಂದ ನಿನ್ನನ್ನು ಬೇಡುತ್ತಿದ್ದೇನೆ. ಇದರಿಂದಲೇ ನನಗೆ ಗೊತ್ತಾಗುತ್ತಿದೆ, ಹೇ ಶ್ರೀಕೃಷ್ಣ​! ನೀನು ದೂರದಿಂದಲೇ ನನ್ನನ್ನು ನೋಡಿ ನಗುತ್ತಿದ್ದೀಯ ಅಂತ​. ನನ್ನ ಹತ್ತಿರಕ್ಕೆ ಬರದೇ ಇದ್ದೀಯ ಅಂತ​. ನಿನ್ನ ಪ್ರೇಮಿಗಳ ಮೂಲಕ​, ನಿನ್ನ ದೂತರ ಮೂಲಕ​, ಕೇಳಿದ ಸಂದೇಶವನ್ನು ನಾನು ತಥ್ಯದಿಂದ ಈಗಲೂ ಗ್ರಹಣಮಾಡಲಿಲ್ಲ​. ಸ್ವಲ್ಪ ಹೊತ್ತು ಆ ಸಂದೇಶಗಳನ್ನು ಕೇಳಿದರೂ, ಮನಸ್ಸು ಅವುಗಳನ್ನು ಸರಿಯಾಗಿ ಗ್ರಹಿಸಲಿಲ್ಲ​. ನಿನ್ನ ಸಂದೇಶವು ನಿಜವೆಂದು ಮನದಟ್ಟಾಗಿದ್ದಿದ್ದರೆ, ‘ಶ್ರೀಕೃಷ್ಣ ಸ್ಮರಣೆಯಲ್ಲಿಯೇ ನಿಜವಾದ ರಸವಿದೆ’ ಎಂದು ಅದಕ್ಕೆ ವಿಶ್ವಾಸವಾಗುತ್ತಿತ್ತು. ‘ವಿಷಯಗಳಲ್ಲಿ ರಸವಿಲ್ಲ​’ ಎಂದು ಅನುಭವ ತಂದುಕೊಂಡು ಬಿಟ್ಟರೆ ಅದು ಮತ್ತೆ ವಿಷಯಗಳ ಕಡೆಗೆ ಕನಸಿನಲ್ಲಿಯೂ ತಿರುಗುವದಿಲ್ಲ​, ನಿನ್ನ ಚರಣಕಮಲದ ರಸಪಾನದಲ್ಲಿಯೇ ಮತ್ತವಾಗಿಬಿಡುತ್ತದೆ. ಈಗಿನ ಮನಸ್ಥಿತಿಯಲ್ಲಿ ಹೀಗೆ ನಡೆಯುವದಿಲ್ಲ​. ಆದರೆ ಶ್ರೀಕೃಷ್ಣ​! ನಾನು ಏನು ಮಾಡಲಿ? ಮನಸ್ಸನು ಒಪ್ಪಿಸುವದು ನನ್ನ ಕೈಯಲ್ಲಿಲ್ಲ​. ಅದು ಬಲಶಾಲಿಯಾಗಿದೆ. ತನ್ನ ಹಟದಲ್ಲೇ ಸಿಕ್ಕಿಕೊಂಡಿದೆ. ಕಾಮ​, ಕ್ರೋಧ​, ಲೋಭ ಮುಂತಾದವುಗಳೊಡನೆ ಮೈತ್ರಿ ಮಾಡಿಕೊಂಡಿದೆ. ಅದು ನಿನ್ನ ಸಂದೇಶವನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿದೆ. ಎಲ್ಲವನ್ನೂ ನೋಡುತ್ತಲೂ ಕೇಳುತ್ತಲೂ ಇದ್ದರೂ ಅಭ್ಯಾಸವಾಗಿರುವ ಮಾರ್ಗದಲ್ಲಿಯೇ ಅದು ಹೋಗುತ್ತಿದೆ.

ಇದಕ್ಕೆ ಉಪಾಯವೊಂದಿದೆ. ನೀನು ಸಂದೇಶವನ್ನು ಕಳಿಸುವದು ಬೇಡ​. ನೀನೇ ಬಾ. ನೀನೇ ಖುದ್ದಾಗಿ ಬಾ. ನನ್ನ ಮಾತನ್ನು ಕೇಳುತ್ತಿದ್ದೀಯ ಅಲ್ಲವಾ? ಒಂದು ಕ್ಷಣವಾಗಲೀ ನನ್ನ ಕಣ್ಣ ಮುಂದೆ ಪ್ರಕಟವಾಗು. ಸ್ವಲ್ಪ ಹೊತ್ತು ನನ್ನ ಹೃದಯದಲ್ಲಿ ಬಂದು ಕುಳಿತುಕೊಂಡು ಬಿಡು. ಅದರ ಬಳಿಕ ಸಂದೇಶದ ಸ್ಥಾನದಲ್ಲಿ, ‘ಹೇ ಮನವೇ, ನೀನು ನನ್ನದಾಗಿದ್ದೀಯ​. ನನ್ನ ಸೇವೆಯಲ್ಲಿರು. ಒಂದು ಕ್ಷಣವೂ ನನ್ನನ್ನು ಬಿಟ್ಟು ಹೋಗಬೇಡ​’ ಎಂದು ನಿನ್ನ ಬಾಯಿಂದಲೇ ಮನಸ್ಸಿಗೆ ಅಪ್ಪಣೆ ಮಾಡು. ಹೇ ನನ್ನ ಸರ್ವಸ್ವ​! ಶ್ರೀಕೃಷ್ಣ​! ಅದು ನಿನ್ನ ಆಜ್ಞೆಯನ್ನು ಪಾಲಿಸುತ್ತದೆ. ನಿನ್ನ ಅಪ್ಪಣೆಯನ್ನು ನಿಶ್ಚಯವಾಗಿ ಅದು ಪಾಲಿಸುವದು ಎಂದು ನನಗೆ ವಿಶ್ವಾಸವಿದೆ. ಹೀಗೆಯೇ ಮಾಡಿಬಿಡಪ್ಪ​. ನಾನು ಯಾವಾಗಲೂ ನಿನ್ನ ಸಾನ್ನಿಧ್ಯವನ್ನು ಹೊಂದಿರುವೆ. ಶ್ರೀಕೃಷ್ಣ​! ಏನು ಹೇಳುತ್ತಿಯ​? ‘ನಿನ್ನ ಹೃದಯವು ಕಲುಷಿತವಾದದ್ದು. ನಾನು ಬರುವದಕ್ಕೆ ಅದು ಯೋಗ್ಯವಾದದ್ದಲ್ಲ​. ನಿನ್ನ ಕಣ್ಣುಗಳು ದೂಷಿತವಾಗಿವೆ. ನನ್ನ ದರ್ಶನ ಪಡೆಯುವದಕ್ಕೆ ಅವುಗಳಿಗೆ ಯೋಗ್ಯತೆಯಿಲ್ಲ​’, ಹೀಗಲ್ಲವೇ ನೀನು ಹೇಳುವದು? ಆದರೆ ನನ್ನ ವಶದಲ್ಲಿ ತಾನೇ ಏನಿದೆ? ನನ್ನ ಕಣ್ಣುಗಳನ್ನು ಮತ್ತು ಹೃದಯವನ್ನು ಶುದ್ಧಿಗೊಳಿಸುವವರು, ಬೇರೆ ಯಾರು ತಾನೇ ಇದ್ದಾರೆ? ನೀನೇ ಖುದ್ದಾಗಿ ಪವಿತ್ರಗೊಳಿಸಿ, ಬಳಿಕ ಬಂದುಬಿಡು. ಅವುಗಳು ಶುದ್ಧವಾದ ಮೇಲೆಯೇ ನೀನು ಬರುವದಾದರೆ ಕೋಟಿಕಲ್ಪಗಳು ಕಳೆದರೂ ನಿನ್ನ ದರ್ಶನವನ್ನು ಪಡೆಯುವದಕ್ಕೆ ನಾನು ಯೋಗ್ಯನಾಗಲಾರೆನು. ಶ್ರೀಕೃಷ್ಣ​! ನೀನು ತುಂಬ ದಯಾಳುವಲ್ಲವೇ? ಮಹಾ ಭಕ್ತವತ್ಸಲನಲ್ಲವೇ? ‘ನಾನು ಪ್ರೇಮಪರವಶನು’ ಎಂದು ನೀನೇ ಅಂಗೀಕರಿಸಿರುವೆಯಲ್ಲವೇ? ... ಆದರೆ, ನಾನು ತಪ್ಪಿರುತ್ತೇನೆ. ನಾನು ಭಕ್ತನೇ ಅಲ್ಲ​. ನಾನು ನಿನ್ನನ್ನು ಪ್ರೇಮಿಸುತ್ತಲೂ ಇಲ್ಲ​. ನಾನು ನಿನ್ನ ದಯೆಗೆ ಪಾತ್ರವಾಗಿದ್ದೇನೆ ಎಂದು ನಿಜವಾದ ಹೃದಯದಿಂದ ಮನಸ್ಸಿಗೆ ಎನಿಸುತ್ತಲೇ ಇಲ್ಲ​. ಎಲ್ಲಿದೆ ಆ ದೀನಭಾವ ನನ್ನಲ್ಲಿ? ನಾನು ಅಭಿಮಾನದ ಮೂರ್ತಿಯೇ ಆಗಿದ್ದೇನೆ. ಹೀಗಿರುವಾಗ ನೀನು ನನ್ನ ಮೇಲೆ ದಯೆ ತೋರಿಸಲಾರೆ ಅಲ್ಲವೇ? ಶ್ರೀಕೃಷ್ಣ​! ಆದರೆ, ಈ ಅವಸ್ಥೆಯಲ್ಲಿರುವದರಿಂದಲೇ ನಾನು ವಾಸ್ತವವಾಗಿ ನಿನ್ನ ದಯೆಗೆ ಪಾತ್ರನಾಗಿದ್ದೇನೆ. ನಾನು ನನ್ನನ್ನು ದಯಾಪಾತ್ರನೆಂದು ತಿಳಿದಿದ್ದರೆ ದಯೆಗೆ ಪಾತ್ರನೇ ಆಗಿರುತ್ತಿದ್ದೆ. ಇದರಲ್ಲಿ ನಿನ್ನ ದಯಾಲುತಾ ಎಲ್ಲಿ ಬಂತು? ನನ್ನ ಸ್ಥಿತಿಯು ಎಷ್ಟು ದಯನೀಯವಾಗಿದೆಯೆಂದರೆ, ನಾನು ನನ್ನನ್ನು ದಯಾಪಾತ್ರನೆಂದು ತಿಳಿಯದೇ ಇರುತ್ತೇನೆ. ಆದ್ದರಿಂದಲೇ ನಾನು ನಿನ್ನ ದಯೆಗೆ ಪಾತ್ರನಾಗಿಬಿಟ್ಟಿದ್ದೇನೆ. ಇದು ಹೇಗೆಂದರೆ, ಭಯಂಕರ ರೋಗದಿಂದ ಪೀಡಿತವಾದ ಒಂದಾನೊಂದು ಪ್ರಾಣಿಯು ಉನ್ಮಾದದಿಂದ ತನ್ನ ರೋಗವನ್ನರಿಯದೆಯೇ ಇರುತ್ತದೆ. ಆದ ಕಾರಣವೇ ಜನರು ಅದರ ಮೇಲೆ ವಿಶೇಷದಯೆಯನ್ನು ತೋರಿಸುವರು. ಇದೇ ರೀತಿಯಲ್ಲಿ ಅಜ್ಞಾನವಶದಿಂದ ನನ್ನ ರೋಗವನ್ನರಿಯದೇ ಇರುವ ನಾನು, ನಿನ್ನ ದಯೆಗೆ ವಿಶೇಷಪಾತ್ರನಾಗದೆ ಇರುವೆನೇ?

ನಾನು ನಿನ್ನ ಲೀಲೆಯನ್ನು ಕೇಳಿದ್ದೆ. ನಿನ್ನ ಕಥೆಯನ್ನು ಶ್ರವಣ ಮಾಡಿದ್ದೆ. ನೀನು ಪತಿತರನ್ನು ಪತಿತಪಾವನರನ್ನಾಗಿ ಮಾಡುತ್ತೀಯ​. ಅಧಮರನ್ನು ಅಧಮರ ಉದ್ಧಾರದ ಸಾಧನರಾಗಿ ಮಾಡುತ್ತೀಯ​. ಪ್ರೇಮಿಗಳು ನಿನ್ನನ್ನು ಕುಣಿಸಲು ಕುಣಿಯುತ್ತೀಯ​. ಅವರು ಏನೇನು ಹೇಳುವರೋ ಅದನ್ನೆಲ್ಲ ನೀನು ಮಾಡುತ್ತೀಯ​. ನಿನ್ನ ಬಾಗಿಲಿಗೆ ಬಂದು, ನಿನ್ನ ಚರಣಗಳಲ್ಲಿ ಬಿದ್ದು ಬೇಡಿಕೊಳ್ಳುತ್ತೇನೆ - ಎತ್ತಿಕೊಳ್ಳೋ ನನ್ನನ್ನು. ‘ನೀನು ನನ್ನವನು’ ಎಂದು ಒಮ್ಮೆ ಹೇಳಿಬಿಡು. ಪ್ರಭುವೇ! ನನ್ನನ್ನು ಸ್ವೀಕರಿಸು. ಈ ಪ್ರಪಂಚವೆಲ್ಲವೂ ನಿನ್ನದೇ ಆಗಿದೆಯಲ್ಲವೇ? ಹೀಗಿರುವಲ್ಲಿ ನನ್ನನ್ನು ಹೊರಗಡೆ ನಿಲ್ಲಿಸುವದಕ್ಕೆ ಇಚ್ಛಿಸುತ್ತೀಯ​? ನಾನು, ನಿನ್ನವನೇ ಆಗಿರುವೆನಲ್ಲವೇ? ಮತ್ತೇ, ಹೀಗೆಂದು ಹೇಳುವದಕ್ಕೆ ಏಕೆ ನಿಧಾನ ಮಾಡುತ್ತಿದ್ದೀಯ​? ನನ್ನ ಸ್ವಾಮಿ! ನೀನು ನಗುತ್ತಿರುವೆ. ಏಕೆ ನಗುತ್ತಿರುವೆ? ನನ್ನ ಅಜ್ಞಾನವನ್ನು ಕುರಿತೇ? ಹೌದು, ನಾನು ನಗೆಗೆ ಯೋಗ್ಯನೇ ಆಗಿರುವೆನು. ‘ನೀನು ನನ್ನವನೇ ಆಗಿದ್ದೀಯ​. ಎಲ್ಲ ಅವಸ್ಥೆಗಳಲ್ಲಿಯೂ ನನ್ನವನಾಗಿಯೇ ಇದ್ದೀಯ​. ನಾನು ಯಾವಾಗಲೂ ನಿನ್ನನ್ನು ಬಿಡಲಿಲ್ಲ​’ ಎಂದು ನೀನು ಸಂಜ್ಞೆ ಮಾಡುತ್ತಿರುವೆ. ನಾಥ​! ಹೀಗೆಂದೇ ಅಲ್ಲವೇ ನೀನು ಹೇಳುವದು - ‘ನೀನು ಪಾಪವನ್ನು ಮಾಡುವಾಗಲೂ ನಿನ್ನ ಜೊತೆಗೆ ನಾನಿದ್ದೆ’ ಎಂದು. ‘ನಿನ್ನ ಹಿಂದೆ ನಿಂತುಕೊಂಡು ನಿನ್ನನ್ನು ನೋಡುತ್ತಾ ಇದ್ದೆ. ಒಂದು ಕ್ಷಣವೂ ಬಿಡಲಿಲ್ಲ​. ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ಮಾತ್ರ ನನ್ನನ್ನು ಬಿಟ್ಟಿದ್ದೀಯ​. ನನ್ನ ಕಡೆಯಿಂದ ಕಣ್ಣುಗಳನ್ನು ತಿರುಗಿಸಿಕೊಂಡು ಬಿಟ್ಟಿದ್ದೀಯ​. ಪ್ರಪಂಚದ ಸೌಂದರ್ಯದಲ್ಲಿ ಮುಗ್ಧನಾಗಿ ನನ್ನ ಕಡೆಗೆ ನೋಡುವದನ್ನೇ ಬಿಟ್ಟು ಬಿಟ್ಟೆ’. ಪ್ರಭುವೇ! ಇದು ಸತ್ಯ​. ನೀನು ಹೇಳುವದು ಸರಿಯೆ. ನೀನು ನನ್ನನ್ನು ಬಿಡಲಿಲ್ಲ​. ನೀನು ನನ್ನ ಮೇಲೆ ಅಮೃತವನ್ನೇ ವರ್ಷಿಸಿದ್ದೀಯ​. ಯಾವ ಅಗಮ್ಯಸ್ಥಳಕ್ಕೆ ಹೋಗಬಾರದೋ ಅಲ್ಲಿಗೆಲ್ಲ ನಿನಗೆ ನನ್ನ ಜೊತೆಯಲ್ಲಿ ಹೋಗಬೇಕಾಯಿತು. ಆದರೆ ಹೇ ಅನಂತಸ್ವರೂಪ​! ಈಗ ನನ್ನ ಪ್ರಮಾದವನ್ನು, ನನ್ನ ಅಪರಾಧವನ್ನು ಎಣಿಸದಿರು. ಈ ದೇಹವು, ಈ ಇಂದ್ರಿಯಗಳು, ಈ ಪ್ರಾಣವು, ಈ ಮನಸ್ಸು, ಬುದ್ಧಿ, ಅಹಂಕಾರ​, ಆತ್ಮ ಏನೇನಾಗಿ ನಾನು ಇದ್ದೆನೋ, ಇರುವೆನೋ, ಆಗುವೆನೋ ಅದೆಲ್ಲವೂ ನಿನ್ನದೇ ಆಗಿತ್ತು. ನಿನ್ನದಾಗಿಯೇ ಇರುವದು. ನಿನ್ನದೇ ಆಗುವದೂ. ಈಗ ‘ನಾನು ಈ ಸತ್ಯದಲ್ಲಿ ಸ್ಥಿರವಾಗುವೆನು ಮತ್ತು ಪ್ರತಿಕ್ಷಣವೂ ನಿನ್ನ ಚರಣಕಮಲಗಳನ್ನು ಹೃದಯದೊಡನೆ ಅಂಟಿಸಿಕೊಳ್ಳುವೆನು’ ಎಂದು ಈ ರೀತಿ ಕೃಪೆಮಾಡು. ನನ್ನ ಜೀವನಸರ್ವಸ್ವ​! ನನ್ನ ಪ್ರಾಣದ ಪ್ರಾಣ​! ನನ್ನ ಸ್ವಾಮಿ! ಯಾವದರಿಂದ ನನ್ನ ಸಮಸ್ತ ಅಹಂಕಾರವೂ ಮಮಕಾರವೂ ಸುಟ್ಟು ಬೂದಿಯಾಗಿ ಬಿಡುವದೋ ಆ ಪ್ರೇಮದ ಜ್ವಾಲೆಯನ್ನು ನನ್ನ ಹೃದಯದಲ್ಲಿ ದೀಪ್ತಗೊಳಿಸು. ಆಗ ಹೃದಯ ಮಂದಿರದಲ್ಲಿ ಕುಳಿತುಕೊಳ್ಳುವದಕ್ಕೆ ನಿನಗೆ ಸ್ಥಳ ಸಿಕ್ಕುವದು. ಪ್ರಿಯತಮನೇ! ಯಾವದರಿಂದ ಸಂಪೂರ್ಣ ಹೃದಯವು ಕರಗಿ ಕಣ್ಣೀರಾಗಿ ಕಣ್ಣುಗಳನ್ನು ತೊಳೆಯುವದೋ ಆ ನಿನ್ನ ವಿರಹವನ್ನು ನೀಡು. ಅದರಿಂದ ಕಣ್ಣುಗಳು ಎಲ್ಲೆಲ್ಲಿಯೂ ಯಾವಾಗಲೂ ನಿನ್ನ ಅನುಪಮವಾದ ರೂಪರಾಶಿಯ ಮಧುವನ್ನು ಕುಡಿದು ಮತ್ತವಾಗಲಿ.

ಪ್ರಭೋ! ನಿನಗಾಗಿ ವ್ಯಾಕುಲತೆಯನ್ನು ಕೊಟ್ಟುಬಿಡಪ್ಪ​. ನಿನಗಾಗಿ ನಾನು ತಳಮಳದಿಂದ ತಿರುಗುತ್ತಿರುವೆ --

ಹೇ ನಾಥ ರಮಣ ಪ್ರೇಷ್ಠ ಕ್ವಾಸಿ ಕ್ವಾಸಿ ಮಹಾಭುಜ । ದಾಸ್ಯಾಸ್ತೇ ಕೃಪಣಾಯಾ ಮೇ ಸಖೇ ದರ್ಶಯ ಸನ್ನಿಧಿಂ ॥
ಹೇ ನಾಥ ಹೇ ರಮಾನಾಥ ವ್ರಜನಾಥಾತಿನಾಶನ । ಮಗ್ನಮುದ್ಧರ ಗೋವಿಂದ ಗೋಕುಲಂ ವೃಜಿಣಾರ್ಣವಾತ್ ॥
ಹೇ ದೇವ ಹೇ ದಯಿತ ಹೇ ಭುವನೈಕಬಂಧೋ, ಹೇ ಕೃಷ್ಣ ಹೇ ಚಪಲ ಹೇ ಕರುಣೈಕಸಿಂಧೋ ।
ಹೇ ನಾಥ ಹೇ ರಮಣ ಹೇ ನಯನಾಭಿರಾಮ​, ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ನಃ ॥
ಯುಗಾಯಿತಂ ನಿಮೇಷೇಣ ಚಕ್ಷುಷಾ ಪ್ರಾವೃಷಾಯಿತಂ । ಶೂನ್ಯಾಯಿತಂ ಜಗತ್ಸರ್ವಂ ಗೋವಿಂದವಿರಹೇಣ ಮೇ ॥

ಶ್ರೀಕೃಷ್ಣ​! ಈ ಕಣ್ಣುಗಳು ನಿನ್ನನ್ನು ಬಿಟ್ಟು ಮತ್ತೊಂದನ್ನು ಯತಕ್ಕೆ ತಾನೇ ನೋಡವವು? ಬೇಕಾದರೆ ನೀನು ಇವುಗಳ ಮುಂದೆ ಬಂದು ನಿಂದುಕೊಳ್ಳೋ. ಅಲ್ಲದಿದ್ದರೆ ಅವುಗಳನ್ನು ಸುಟ್ಟು ಬಿಡು. ಈ ವಾಕ್ಕು ಮತ್ತೊಂದರ ಹೆಸರನ್ನ್ನು ಏಕೆ ತಾನೇ ತೆಗೆದುಕೊಳ್ಳುತ್ತಿದೆಯೋ? ಇದರಿಂದ​, ಬೇಕಾದರೆ, ನಿನ್ನ ಹೆಸರೇ ಬರಲಿ. ಇಲ್ಲದಿದ್ದರೆ ಇದು ನಷ್ಟವೇ ಆಗಲಿ. ಶ್ರೀಕೃಷ್ಣ​! ನನ್ನ ಕರ್ಣವು ನಿನ್ನ ಮಧುರ ಆಲಾಪವನ್ನೇ ಸೇವಿಸಲಿ, ನಿನ್ನ ಕೊಳಲಿನ ನಾದವನ್ನೇ ಕೇಳಲಿ. ಇಲ್ಲದಿದ್ದರೆ ಕಿವುಡಾಗಿಬಿಡಲಿ. ನನ್ನ ಚಿತ್ತವೃತ್ತಿಯು ಮತ್ತೇನನ್ನೂ ನೋಡದೆ ಇರಲಿ, ಕೇಳದೆ ಇರಲಿ, ಮುಟ್ಟದೆ ಇರಲಿ. ಏನು? ನನ್ನ ಚಿತ್ತವೃತ್ತಿಯೇ? ಅಲ್ಲ​. ಈ ಚಿತ್ತವೃತ್ತಿಯು ನಿನ್ನದೇ ಆಗಿದೆ. ಪ್ರಭುವೇ! ಇದನ್ನು ನಿನ್ನ ಚರಣಗಳಲ್ಲಿ ಇಟ್ಟುಕೊ. ನನ್ನ ದಯಾಳು ಪ್ರಭುವೇ! ಪ್ರೇಮಿ ಪ್ರಭುವೇ! ಇಟ್ಟುಕೊಳ್ಳಪ್ಪ​. ಇನ್ನು ತಡೆಯಲಾರೆ. ಚಿತ್ತವು ವಿವಶವಾಗುತ್ತಿದೆ. ಒಂದು ಸಲ ಕೃಪೆ ಮಾಡಿಬಿಡಪ್ಪ​. ನೀನು ಕೃಪೆ ಮಾಡಲೇಬೇಕು. ಕೃಪೆ ಮಾಡದೆಯೇ ನೀನು ಬದುಕಲೇ ಆರೆ. ಹೀಗಿರುವಾಗ ವಿಳಂಬವೇತಕ್ಕೆ? ಈಗಲೇ ಮಾಡಿಬಿಡಪ್ಪ​. ಇದೋ ನೋಡು. ಮುಖತಿರುಗಿಸಿ, ಕಣ್ಣು ಮಿಟುಕಿಸದೇ ನಿನ್ನನ್ನು ನೋಡುತ್ತಿದ್ದೇನೆ. ನಿನ್ನನ್ನೇ ನೋಡುತ್ತಿದ್ದೇನೆ. ನನ್ನ ಪ್ರಿಯಕೃಷ್ಣ​! ಪ್ರಿಯಕೃಷ್ಣ​! ಕೃಷ್ಣ​! ಕೃಷ್ಣ​! ಕೃಷ್ಣ​!

No comments:

Post a Comment